ಅಧಿಕಾರಿಗಳಿಗೆ ಮಾದರಿಯಾದ ಜಿಲ್ಲಾಧಿಕಾರಿ
ತುಮಕೂರು - ಅಪಘಾತದಲ್ಲಿ ನಿಧನರಾದ ಅಗ್ನಿಶಾಮಕ ವಾಹನ ಚಾಲಕನ ಪತ್ನಿಗೆ ಸರ್ಕಾರದಿಂದ ಆದೇಶ ಬಂದ ಕ್ಷಣದಲ್ಲೇ ಅನುಕಂಪದ ಉದ್ಯೋಗ ನೀಡಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾನವೀಯತೆ ಮೆರೆದಿದ್ದಾರೆ.
ತುರುವೇಕೆರೆ ತಾಲೂಕಿನ ಡಿ.ಕಲ್ಕೆರೆಯ ಪರಮೇಶ್ವರ್ ಅಗ್ನಿಶಾಮಕ ವಾಹನದ ಚಾಲಕರಾಗಿ ಉದ್ಯೋಗದಲ್ಲಿದ್ದರು. ಕರ್ತವ್ಯ ಮುಗಿಸಿ ಮನೆಗೆ ಬರುವಾಗ ೨೦೨೩ರಲ್ಲಿ ಅಪಘಾತದಲ್ಲಿ ಮೃತರಾಗಿದ್ದರು. ಈ ಪ್ರಕರಣ ಇಲಾಖೆ ಹಂತದಲ್ಲಿ ಇತ್ಯರ್ಥವಾಗಿ ಪ್ರಾದೇಶಿಕ ಆಯುಕ್ತರ ಕಚೇರಿಯಿಂದ ಮಂಗಳವಾರ ಆದೇಶವಾಗಿತ್ತು. ತಕ್ಷಣ ಜಿಲ್ಲಾಧಿಕಾರಿಗಳು ತಮ್ಮ ಸಿಬ್ಬಂದಿ ಮೂಲಕ ಮೃತ ಪರಮೇಶ್ವರ್ ಅವರ ಪತ್ನಿ ರೋಹಿಣಿ ಅವರನ್ನು ಕಚೇರಿಗೆ ಕರೆದು ಮಾತನಾಡಿಸಿದರು.
ಮೂರು ವರ್ಷದ ತಮ್ಮ ಮಗು ಹಾಗೂ ಅತ್ತೆಯೊಂದಿಗೆ ಬಂದಿದ್ದ ರೋಹಿಣಿಯವರನ್ನು ತಮ್ಮ ಕಚೇರಿಯಲ್ಲೇ ಕೂರಿಸಿಕೊಂಡು ಕೇವಲ ಅರ್ಧ ತಾಸಿನಲ್ಲಿ ಕುಣಿಗಲ್ ತಾಲೂಕಿನಲ್ಲಿ ಡಿ.ವರ್ಗದ ನೌಕರರಾಗಿ ನೇಮಕಾತಿಗೆ ಆದೇಶಿಸಿ ಸಂತ್ರಸ್ತ ಮಹಿಳೆಗೆ ಅನುಕಂಪದ ಉದ್ಯೋಗದ ನೇಮಕಾತಿ ಆದೇಶ ಪತ್ರ ನೀಡಿದ್ದಾರೆ. ನೇಮಕಾತಿ ಆದೇಶ ಸಿದ್ಧವಾಗುವವರೆಗೆ ಅರ್ಧ ತಾಸು ತಮ್ಮ ಕಚೇರಿಯಲ್ಲಿ ಪಕ್ಕದಲ್ಲೇ ಕುರ್ಚಿಯಲ್ಲಿ ಕೂರಿಸಿಕೊಂಡ ಜಿಲ್ಲಾಧಿಕಾರಿಗಳು ಮಗುವಿಗೆ ಬಿಸ್ಕತ್ತು, ಚಾಕ್ಲೆಟ್, ನೀರು ತರಿಸಿ ಕೊಟ್ಟಿದ್ದು, ಇದು ಅವರ ಅಂತಃಕರಣದ ಭಾವವನ್ನು ತೋರಿತ್ತದೆ.
ಸರ್ಕಾರಿ ಕಚೇರಿಗಳಲ್ಲಿ ವರ್ಷಾನುಗಟ್ಟಲೆ ಅಲೆದರು ಸಾರ್ವಜನಿಕರ ಕೆಲಸವಾಗದ ಈ ಕಾಲದಲ್ಲಿ ಜನಸೇವೆಯೇ ಜನಾರ್ದನ ಸೇವೆ ಎಂದು ನಂಬಿ ಕೇವಲ ಒಂದೇ ದಿನದಲ್ಲೇ ಸಂತ್ರಸ್ತ ಮಹಿಳೆಗೆ ನೇಮಕಾತಿ ಆದೇಶ ಪತ್ರ ನೀಡಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಅಧಿಕಾರಿಗಳಿಗೆ ಮಾದರಿಯಾಗಿದ್ದಾರೆ.